10 ಮೆ 2012

ವರದಾ ಬಸ್ಸಿಗೆ ಬೆಂಕಿ ಬಿತ್ತು !!


ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ನಮ್ಮೂರಾದ ಮುಂಗಳಿಮನೆಗೆ ಇರುವ ಹದಿನೈದು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು.

ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು.
ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹುಡುಗಿಯರು, ಕುಡುಕರು, ಶಾಲಾ ಬಾಲಕ, ಬಾಲಕಿಯರು - ಹೀಗೇ ಎಲ್ಲಾ ವರ್ಗದ ಜನರೂ ಸೇರಿ ಅದೊಂದು ಮಿನಿ ಭಾರತವೇ ಆಗಿತ್ತು. ಜೊತೆಗೆ ಸೀಮೆಣ್ಣೆ ಕ್ಯಾನು, ಮೆಣಸಿನಕಾಯಿ ಚೀಲ, ತರಕಾರಿ, ಬಂಗಡೆ ಮೀನು, ಮುಳಗಾಯಿ, ತೆಂಗಿನಕಾಯಿ, ಹುಣಸೇಹಣ್ಣು ಎಂದು ಅರ್ಧ ಮಾರುಕಟ್ಟೆಯೇ ಬಸ್ಸೊಳಗಿತ್ತು. ಬೇರೆ ಬೇರೆ ಬ್ರಾಂಡು ಹೊಡೆದ ಬ್ರಾಂಡ್ ಫ್ಯಾಕ್ಟರಿಗಳಿಗೇನೂ ಕೊರತೆ ಇರಲಿಲ್ಲ. ಹೀಗೆ ಎಲ್ಲಾ ಪರಿಮಳವೂ ಸೇರಿ ಅದೊಂದು ಮಿಶ್ರತಳಿಯ ವಾಸನೆಯಾಗಿ ಬಸ್ಸೊಳಗೆ ಹರಡಿತ್ತು. ಏಜೆಂಟ್ ಸೀತಾರಾಮಣ್ಣ ಕೂಗಿ ಕೂಗಿ ಟಿಕೇಟು ಕೊಟ್ಟರೆ ಕಂಡಕ್ಟರ‍್ ಚಂದ್ರಣ ಖುಶಿಯಿಂದ ದುಡ್ಡು ಎಣಿಸಿದರು. ಕೊನೆಗೂ ಬಸ್ ಹೊರಟಿತು.

ರಾಘವೇಂದ್ರ ಅಕ್ಕಿ ಮಿಲ್ ಹತ್ತಿರ ಬಂದಾಗ ಅಲ್ಲೊಂದಿಷ್ಟು ಜನ ಹತ್ತಿದರು. ಜೊತೆಗೆ ಅಕ್ಕಿ ಮೂಟೆ ಬೇರೆ. ಅಲ್ಲಿಂದಲೂ ಹೊರಟ ನಂತರ ಮುಂದೆ ಹೋಗಿ ವರದಳ್ಳಿ ರಸ್ತೆಗೆ ತಿರುಗಿಕೊಂಡಾಗ ಅಲ್ಲೊಂದಿಷ್ಟು ಜನ ಒತ್ತರಿಸಿ ಹತ್ತಿಕೊಂಡರು. ಈ ರೀತಿ ವರದ ಬಸ್ಸೆಂಬುದು "ಸಂತೃಪ್ತ ಸ್ಥಿತಿ" ತಲುಪಿದ ಭೌತಿಕ ವಸ್ತುವಂತೆ ಕಂಡು ಬಂತು. ಅಲ್ಲಿ ಇನ್ನೊಂದೇ ಒಂದು ಕೆಜಿ ಜಾಸ್ತಿ ಆದರೂ ಬಸ್ಸು ಸಿಡಿದು ನುಚ್ಚು ನೂರಾಗಿ ಬಿಡುತ್ತೇನೋ ಎನ್ನುವಂತಿತ್ತು. ಈ ವಿಪರೀತ ನೂಕುನುಗ್ಗಲಿನಿಂದ ಬೇಸತ್ತ ಅನೇಕರು ಕಂಡಕ್ಟರು, ಡ್ರೈವರಿಗೆ ಬೈಯುತ್ತಾ ತಮ್ಮ ನೋವು ತೋಡಿಕೊಂಡರು.

ಹೆಲಿಫ್ಯಾಡ್ ಬಳಿ ಮತ್ತೊಂದಿಷ್ಟು ಜನ ಕೈ ಅಡ್ಡ ಹಾಕಿದರು. ಚಾಲಕ ಬಸ್ ನಿಲ್ಲಿಸಲಿಲ್ಲ. ಅವರೇನದರೂ ಓಡಿ ಬಂದಿದ್ದರೆ ಬಸ್‌ಗಿಂತಾ ಮುಂದೆ ಹೋಗಿ ಮನೆ ಸೇರಬಹುದಿತ್ತು. ಬಸ್ ಅಷ್ಟೊಂದು ವೇಗವಾಗಿ ಓಡುತ್ತಿತ್ತು. ಅಂತಹ ವೇಗದಲ್ಲೂ ಸೆಟ್ಟೀಸರ ತಂಗುದಾಣದಲ್ಲಿ ಕಂಡಕ್ಟರ‍್ ವಿಷಲ್ ಹಾಕಿದರೂ ಚಾಲಕ ನಿಲ್ಲಿಸಲಿಲ್ಲ. ಅದಕ್ಕೆ ಕಾರಣ ಅಲ್ಲಿ ಇಳಿಯಬೇಕಾಗಿದ್ದ ನಾಲ್ಕಾರು ಮಂದಿ ನೂರಾರು ಜನರ ನಡುವೆ ಸಿಕ್ಕಿಕೊಂಡಿರುವುದರಿಂದ ನಿಲ್ಲಿಸಿದರೆ ಅವರು ಇಳಿಯಲು ತುಂಬಾ ಸಮಯವಾಗಿ ಬಿಡುತ್ತಲ್ಲ. ಹಾಗಾಗಿ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಕರ್ಕೀಕೊಪ್ಪ ನಿಲ್ದಾಣದಲ್ಲಿ ಜಾಸ್ತಿ ಜನ ಇಳಿಯುತ್ತಾರೆ. ಇವರನ್ನೂ ಅಲ್ಲೇ ಒಟ್ಟಿಗೆ ಇಳಿಸಿದರಾಯ್ತು ಎಂದು ಚಾಲಕ ಹಾಗೆ ಮಾಡಿದ್ದ. ಆದರೆ ಅಲ್ಲಿ ಇಳಿಯಬೇಕಾಗಿದ್ದವರು ಒಂದು ಥರದ ಗೌಜು ಎಬ್ಬಿಸಿದರು. ಕೊನೆಗೂ ಬಸ್ಸು ಬಂದು ನಿಂತಿದ್ದು ಕರ್ಕೀಕೊಪ್ಪ ನಿಲ್ದಾಣದಲ್ಲೇ.

 ಅಲ್ಲಿ ಬಂದು ನಿಲ್ಲುವುದಕ್ಕೂ ಸರಿಯಾಗಿ ಇಂಜಿನ್‌ನಿಂದ ಹೊಗೆ ಶುರುವಾಗಿ ಅದು ಕೆಲವೇ ಕ್ಷಣದಲ್ಲಿ ದೊಡ್ಡದಾಗಿ ಹೋಯ್ತು. ಅದೇ ಸಮಯಕ್ಕೆ ಸರಿಯಾಗಿ ಸೆಟ್ಟಿಸರದಲ್ಲೇ ಇಳಿಯಬೇಕಾಗಿದ್ದ ಕುಡುಕನೊಬ್ಬ ತನ್ನನ್ನು ಮುಂದೆ ತಂದು ಇಳಿಸಿದ್ದಕ್ಕಾಗಿ ಇಳಿದು ಹೋಗುವಾಗ ಕೋಪದಲ್ಲಿ "ವರದಾ ಬಸ್ಸಿಗೆ ಬೆಂಕಿ ಬಿತ್ತು" ಎಂದು ನುಡಿದದ್ದೂ ನಡೆದು ಹೋಯ್ತು. ವನೇನೋ ಅವನಷ್ಟಕ್ಕೆ ಅವನೇ ಬೈದು ಹೊರಟು ಹೋದ. ಆದರೆ ಇದು ಕೇಳಿದ್ದೇ ತಡ "ಬೆಂಕಿ ಬಿತ್ತಾ ? ಅಯ್ಯೋ ಇಳೀರಿ ಎಲ್ಲ" ಎನ್ನುತ್ತಾ ಜನರು ಕಂಡ ಕಂಡಲ್ಲಿ ಧುಮುಕತೊಡಗಿದರು.

ಪುಣ್ಯಕ್ಕೆ ಆ ಬಸ್ಸಿನ ಕಿಟಕಿಗೆ ಗಾಜುಗಳೇ ಇರಲಿಲ್ಲ. ದೊಡ್ಡ ಕಿಟಕಿ ಬೇರೆ. ಎಲ್ಲಾ ಕಿಟಕಿಗಳಿಂದಲೂ ಮೇಲೆ ತಿಳಿಸಿದ ಎಲ್ಲಾ ವರ್ಗದ ಸಾರ್ವಜನಿಕರೂ ಧುಮುಕುತ್ತಿದ್ದರು. ಕೆಳಗೆ ಯಾರಿದ್ದಾರೆ ಯಾರಿಲ್ಲ ಅಂತ ನೋಡಲಿಲ್ಲ. ಅದರಲ್ಲೂ ಕೆಲವರು ತಮ್ಮ ತಮ್ಮ ಸಾಮಾನಿನ ಮೂಟೆಯನ್ನೂ ಬಿಡದೇ ಹೊರಗೆ ಎಸೆದುಕೊಂಡು ನಂತರ ಹೊರಗೆ ಹಾರಿದರು. ಕೆಳಗೆ ಹಾರಿ ಕಾಲು ನೋವು ಮಾಡಿಕೊಂಡಿರುವಾಗಲೇ ಮೇಲಿನಿಂದ ತಲೆ ಮೇಲೆ ಸಾಮಾನು ಚೀಲಗಳು ಬಿದ್ದವು. ಕೆಲವರು ಎಸೆದ ಸೀಮೆಣ್ಣೆ ಕ್ಯಾನ್ ಮುಚ್ಚಳ ತೆರೆದುಕೊಂಡು ಅದು ಹಲವರ ಸಾಮಾನುಗಳನ್ನು ತೋಯಿಸಿತು. ನಾನು ಕಿಟಕಿ ಪಕ್ಕದಲ್ಲೇ ಕುಳಿತಿದ್ದರೂ ನನಗೆ ಮೇಲೇಳಲೂ ಬಿಡದಂತೆ ನನ್ನನ್ನು ದಾಟಿಕೊಂಡು ಜನರು ಧುಮುಕುತ್ತಿದ್ದುದು ಮಜವಾಗಿತ್ತು. ಹೆಂಗಸರು ಮಕ್ಕಳೇಲ್ಲಾ ಕಿಟಕಿಯಿಂದಲೇ ಹಾರಲು ಹೋಗಿ ಸಮತೋಲನ ಸಿಗದೇ ಬಿದ್ದು ಲಗಾಟಿ ಹೊಡೆದುದೂ ಆಯ್ತು. ಈ ನಡುವೆ ಚಾಲಕ ಮತ್ತು ನಿರ್ವಾಹಕ ಇಂಜಿನ್ ಪರಿಶೀಲಿಸಿ ಅಲ್ಲಿ ಏನೂ ತೊಂದರೆ ಇಲ್ಲದ್ದನ್ನು ಗಮನಿಸಿ ಹಾರುತ್ತಿದ್ದವರ ಬಳಿ ಬಂದು "ಏನೂ ಆಗಿಲ್ಲರೀ, ಗಾಭರಿ ಆಗಬೇಡಿ, ರೇಡಿಯೇಟರ್‌ನಲ್ಲಿ ನೀರು ಕಡಿಮೆ ಆಗಿದೆ ಅಷ್ಟೇ!" ಎಂದು ಹೇಳಿದರೆ ಯರೂ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಅವರ ಮೇಲೆಯೇ ನೆಗೆದು ಸೇಡು ತೀರಿಸಿಕೊಂಡರು.

ಆಗ ನಾನು ನೋಡುತ್ತಿರುವಂತೆಯೇ ನನ್ನ ಎದುರಿಂದ ಯಾರೋ ಪ್ಯಾರಾಚೂಟ್ ಕಟ್ಟಿಕೊಂಡು ಹಾರಿದಂತೆ ಕಂಡು ಬಂತು. ’ಅಲೆಲೆ, ಬಸ್‌ನಿಂದ ಹಾರಲಿಕ್ಕೂ ಪ್ಯಾರಾಚ್ಯೂಟೇ?’ ಎಂದು ಚಕಿತನಾಗಿ ಹಾರಿದವರನ್ನು ನೋಡಿದರೆ ಅದು ಹಾಯ್ಗೋಡಿನ ಕಳ್ಳಭಟ್ಟಿ ಮಾರುವ ವನಜಕ್ಕ! ಅವಳು ಪ್ಯಾರಾಚೂಟ್ ಕಟ್ಟಿಕೊಂಡು ಹಾರಿರಲಿಲ್ಲ... ಅವಳು ಸಹಜವಾಗೇ ಹಾರಿದ್ದರೂ ಅವಳ ಸೀರೆ ಮತ್ತು ಲಂಗ ಗಾಳಿಗೆ ಪ್ಯಾರಾಚೂಟ್‌ನಂತೆ ಅಗಲವಾಗಿ ಬಿಚ್ಚಿಕೊಂಡು ಅವಳನ್ನು ಕ್ಷೇಮವಾಗಿ ನೆಲಕ್ಕಿಳಿಸಿದ್ದವು. ಅದನ್ನು ಕೆಳಗೆ ನಿಂತು ನೋಡಿದ ಕಾಲೇಜು ಹುಡುಗರು ಮುಸಿ ಮುಸಿ ನಗುತ್ತಾ ಮತ್ತೆ ಯಾರಾದರೂ ಇದೇ ರೀತಿ ಹಾರುವರೇ ಎಂದು ಕಾಯತೊಡಗಿದರು.

ಈ ರೀತಿ ಒಂದು ಹಂತಕ್ಕೆ ಬಸ್ ಖಾಲಿಯಾಗಿ ಕೊನೆಗೆ ನಾವೊಂದು ಹತ್ತು ಹನ್ನೆರಡು ಜನರಷ್ಟೇ ಉಳಿದಾಗ ಬಸ್ಸಿಗೆ ಬೆಂಕಿ ಬಿದ್ದಿಲ್ಲ ಅಂತ ತೀರ್ಮಾನವಾಯ್ತು. ಮತ್ತೆ ಎಲ್ಲರೂ ಧಡಬಡಾಯಿಸಿ ಬಸ್ ಏರಿದರು. ಕರ್ಕೀಕೊಪ್ಪದಲ್ಲೇ ಸುಮಾರು ಅರ್ಧ ಬಸ್ ಜನ ಇಳಿಯುವುದು ಇದ್ದುದರಿಂದ ಈ ಸಲ ಅಷ್ಟೊಂದು ಕಷ್ಟ ಆಗಲಿಲ್ಲ. ಈ ಬಾರಿ ’ಬಸ್‌ಗೆ ಬೆಂಕಿ ಬಿತ್ತು’ ಎಂದು ಹೇಳಿದ ಆ ಕುಡುಕನನ್ನು ಎಲ್ಲರೂ "ಥೂ ಅವನ ಮನೆ ಹಾಳಾಗ" ಎಂದು ಬೈದುಕೊಳ್ಳುತ್ತಾ ತಮ್ಮ ತಮ್ಮ ಸ್ಥಿತಿಯ ಬಗ್ಗೆ ಹಳಿದುಕೊಳ್ಳತೊಡಗಿದರು. ಒಬ್ಬೊಬ್ಬರೂ ತಾವು ಹಾರಿದ ಬಗೆಯನ್ನು ಬಗೆ ಬಗೆಯಲ್ಲಿ ವರ್ಣಿಸುತ್ತಿದ್ದರೆ ವನಜಕ್ಕ ತಾನೇನೂ ಕಮ್ಮಿ ಇಲ್ಲ ಅನ್ನುವಂತೆ "ನನ್ನ ಸೀರೆ ಕಂಡಿರ್ಯಾ? ಹೆಂಗ್ ಬಿಚ್ಕಂಡಿತ್ ಅಂತ?!" ಎಂದು ದೊಡ್ಡದಾಗಿ ಹೇಳುತ್ತಾ ಅದನ್ನು ನೋಡದಿದ್ದವರೂ ಸಹ ಕಲ್ಪನೆ ಮಾಡಿಕೊಳ್ಳುವಂತೆ ಮಾಡಿದಳು!

ಏನೆ ಆದರೂ ವರದಾ ಬಸ್ಸಿನ ಸೇವೆಯನ್ನು ನಮ್ಮೂರಿನ ಜನ ಮರೆಯುವ ಹಾಗೆಯೇ ಇಲ್ಲ. ದಶಕಗಳ ಕಾಲ ಅದು ಸೇವೆ ನೀಡಿ ಈಗ ಮರೆಯಾಗಿದೆ. ಅದರ ಮಾಲೀಕರು ಬಸ್‌ ರೂಟ್‌ ಅನ್ನು ಗಜಾನನ ಸಂಸ್ಥೆಯವರಿಗೆ ಮಾರಿದ್ದಾರೆ. ವರದಾ ಬಸ್‌ ನಮ್ಮೂರಿನವರ ಜನ ಮಾನಸದಲ್ಲಿ ಹೇಗೆ ಬೇರು ಬಿಟ್ಟಿತ್ತೆಂದರೆ ಈಗಿನ ಗಜಾನನದವರೂ ಸಹ "ಶ್ರೀ ವರದಾ" ಹೆಸರಿನಲ್ಲೇ ಒಂದು ಬಸ್‌ನ್ನು ನಮ್ಮೂರಿಗೆ ಬಿಟ್ಟಿದ್ದಾರೆ!

3 ಮೆ 2012

ಡಬ್ಬಿಂಗ್ ಬೇಕೇ ಬೇಡವೇ ?

"ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಡ" ಎಂದು ಶುರುವಾದ ಹೋರಾಟ ಹಲವು ವರ್ಷಗಳ ತರುವಾಯ ಇಂದು "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಎಂಬ ಹೋರಾಟವಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಕಾಲ ಬದಲಾಗಿದ್ದರೂ, ಹೋರಾಟಗಳ ದಿಕ್ಕೇ ಬದಲಾಗಿದ್ದರೂ, ಹೋರಾಟಗಾರರೂ ಬದಲಾಗಿದ್ದರೂ ಸಹ "ಕನ್ನಡದ ಉಳಿವು" ಎಂಬ ಪೆಡಂಭೂತ ಮಾತ್ರ ಹಾಗೆಯೇ ಉಳಿದುಕೊಂಡಿರುವುದು ದುರ್ದೈವವೇ ಸರಿ.

ಆದರೆ ಹಿಂದಿನ ಹೋರಾಟಗಾರರಿಗೂ ಇಂದಿನ ಆನ್‌ಲೈನ್ (ಫೇಸ್‌ಬುಕ್, ಟ್ವಿಟರ‍್) ಹೋರಾಟಗಾರರಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ನಿಜಾವ ಕನ್ನಡಾಭಿಮಾನಿಗಳು ಮನಗಾಣಬೇಕು. ಈ ಆನ್‌ಲೈನ್ ( ಒನ್‌ಲೈನ್ ) ಹೋರಾಟಗಾರರು ಇಂದು "ಪರಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ" ಎಂದು ಹೇಳುತ್ತಿರುವುದೇನೋ ಸರಿ. ಆದರೆ ಅದರ ಹಿಂದೆ ನಿಜಕ್ಕೂ ಕನಡದ ಕಾಳಜಿ ಇದೆಯಾ ? ಎಂಬುದನ್ನು ಸ್ವಲ್ಪ ಪರಿಶೀಲಿಸಬೇಕಾಗಿದೆ. ಏಕೆಂದರೆ ನಾನು ಗಮನಿಸಿದಂತೆ ಇಂತಹ ಡಬ್ಬಿಂಗ್ ಪರವಾದಿಗಳಲ್ಲಿ ಶೇಕಡಾ ಹತ್ತರಷ್ಟು ಜನರೂ ಕನ್ನಡ ಲಿಪಿ ಬಳಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಉಳಿದಂತೆ ಕಂಗ್ಲಿಷ್ ಬಳಸುವವರೇ ಹೆಚ್ಚು. ಇನ್ನು ಕೆಲವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ (ಕಷ್ಟಪಟ್ಟು) ಹಾಕಿ, ಅಲ್ಲಿಗೆ ತಮ್ಮ ಕನ್ನಡ ಕೈಂಕರ್ಯ ಮುಗಿಯಿತೆಂದು ಭಾವಿಸಿ, ನಂತರ ಆಂಗ್ಲವೇ ದೇವರು ಎಂದು ಆಂಗ್ಲಕ್ಕೆ ಮೊರೆ ಹೋಗುತ್ತಾರೆ. ಇಂತವರನ್ನು ಕನ್ನಡಾಭಿಮಾನಿಗಳು ಎನ್ನಲು ಸಾಧ್ಯವೇ ? ಇವರೆಲ್ಲಾ ಬಾಯಿ ಬಡುಕ ಕನ್ನಡಾಭಿಮಾನಿಗಳುಷ್ಟೇ. ಇವರ ಮನೆಗಳಲ್ಲಿ ಒಂದು ಕನ್ನಡ ಪತ್ರಿಕೆಯನ್ನೂ ಹಾಕಿಸುತ್ತಾರೋ ಇಲ್ಲವೋ. ಆಂಗ್ಲ ಪತ್ರಿಕೆಗಳಲ್ಲಿ ಬರುವ ಲೇಖನಗಳಿಂದ ಪ್ರೇರಿತರಾಗಿ "ಡಬ್ ಪರವಾದಿ"ಗಳಾಗಿದ್ದಾರೆ.

ಹಾಗಂತ ಡಬ್‌ ಪರವಾದಿಗಳಲ್ಲಿ ಯಾರೂ ಕನ್ನಡಾಭಿಮಾನಿಗಳೇ ಇಲ್ಲ ಎಂದಲ್ಲ. ಅಲ್ಲಿ ನಿಜಕ್ಕೂ ಕನ್ನಡದ ಕಾಳಜಿ ಇರುವ ಅನೇಕರು "ಡಬ್ ಆಗಲಿ" ಎನ್ನುತ್ತಿದ್ದಾರೆ. ಅವರ ವಾದವನ್ನೂ ಆಲಿಸಬೇಕಾಗಿದೆ. ಆದರೆ ನಮ್ಮ ಮುಂದಿರುವ ಪ್ರಶ್ನೆ ಸಾರಾ ಸಗಟಾಗಿ ಡಬ್‌ ಮಾಡಲು ಅನುಮತಿಸುವುದು ಸರಿಯೇ ? ಅನ್ನುವುದು. ಕನ್ನಡ ಚಿತ್ರರಂಗದವರು "ಡಬ್ಬಿಂಗ್ ಬೇಡ" ಎನ್ನುತ್ತಿದ್ದಾರೆ. ಇವರೆಲ್ಲಾ "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಅನ್ನುತ್ತಿದ್ದಾರೆ. ಅವರು "ಡಬ್ಬಿಂಗ್ ಮಾಡಿದರೆ ಕನ್ನಡ ಚಿತ್ರರಂಗವೇ ನಶಿಸಿ ಹೋಗುತ್ತದೆ" ಅಂದರೆ ಇವರು "ಹೋದರೆ ಹೋಗಲಿ, ನೀವು ಕೊಡುವ ಕೆಟ್ಟ ಚಿತ್ರಗಳನ್ನು ನೋಡಿ ನೋಡಿ ಸಾಕಾಗಿದೆ. ಆರು ಕೋಟಿ ಕನ್ನಡಿಗರ ಆಯ್ಕೆಯೇ ಮುಖ್ಯ, ನಿಮ್ಮ ನಾಲ್ಕಾರು ಸಾವಿರ ಜನರ ಆಯ್ಕೆಯಲ್ಲ" ಅನ್ನುತ್ತಿದ್ದಾರೆ.

ಎರಡೂ ಕಡೆಗೂ ತಪ್ಪು ಸರಿ ಎರಡೂ ಇದೆ. ಇಷ್ಟು ದಿನ ಕನ್ನಡ ಚಿತ್ರರಂಗದವರು ಬರೀ ಕೆಟ್ಟ ಚಿತ್ರಗಳನ್ನೇ ಕೊಟ್ಟಿಲ್ಲ. ಪರ ಭಾಷೆಯವರೂ ಅಚ್ಚರಿ ಪಡುವಂತಹ ಅದ್ಬುತ ಚಿತ್ರಗಳನ್ನೂ ನೀಡಿ ನಮ್ಮನ್ನು ಸಂತೈಸಿದ್ದಾರೆ. ಹಾಗೆಯೇ ಅನೇಕ ಕೆಟ್ಟಾನು ಕೆಟ್ಟ ಚಿತ್ರಗಳನ್ನು ನೀಡಿ ನಮ್ಮ ಆಸೆಗೆ ತಣ್ಣೀರನ್ನೂ ಎರಚಿದ್ದಾರೆ. ಒಂದು ವೇಳೆ ಡಬ್ಬಿಂಗ್ ಅನುಮತಿಸಿದರೆ ಕನ್ನಡ ಚಿತ್ರರಂಗ ಬಹುತೇಕ ಚಟ್ಟ ಕಟ್ಟುವುದು ಗ್ಯಾರಂಟಿ ಎಂದೇ ಅನ್ನಿಸುತ್ತಿದೆ. ಹಾಗೊಂದು ವೇಳೆ ನಡೆದೇ ಹೋದರೆ ಆಗ ಕನ್ನಡಾಭಿಮಾನಿಗಳಾದ ನಮಗೆ ಹೇಳಿಕೊಳ್ಳಲಿಕ್ಕೂ ಒಂದು ಚಿತ್ರರಂಗ ಅಂತ ಇಲ್ಲದಾಗುತ್ತದೆ ಅನ್ನುವುದನ್ನು ಡಬ್ಬಿಂಗ್ ಪರವಾದಿಗಳು ಗಮನಿಸಬೇಕು. ಆ ನಂತರ ಈಗಿನಂತೆ ಆಗೊಂದು ಈಗೊಂದು ಬರುವ "ಮುಂಗಾರು ಮಳೆ, ದುನಿಯಾ, ಮೊಗ್ಗಿನ ಮನಸ್ಸು"ಗಳೂ ನಮ್ಮ ಪಾಲಿಗೆ ಇಲ್ಲವಾಗಿ, ಪರಭಾಷೆಯ ಚಿತ್ರಾನ್ನಗಳಿಗೇ ಕಾದು ಕುಳಿತಿರಬೇಕಾಗುತ್ತದೆ. ಆಗ ನಮ್ಮ ಸ್ವಂತಿಕೆ ಉಳಿಯುತ್ತದೆಯೇ ? ಆಗ ಒಬ್ಬ ತಮಿಳನೆದುರಲ್ಲೋ ತೆಲುಗನೆದುರಲ್ಲೋ ಎದೆ ತಟ್ಟಿ "ನಮ್ಮದೊಂದು ಚಿತ್ರ ನಿಮ್ಮ ಭಾಷೆಗೆ ಡಬ್ / ರೀಮೇಕ್ ಆಗಿದೆ ನೋಡಯ್ಯಾ" ಎಂದು ಹೇಳುವ ಅವಕಾಶ ಇರುತ್ತದೆಯೇ ? "ಕನ್ನಡ, ಕನ್ನಡತನವೆಂಬುದು ಕೇವಲ ಕನ್ನಡ ಚಿತ್ರರಂಗದವರ ಸ್ವತ್ತಲ್ಲ, ಅದು ಎಲ್ಲಾ ಆರು ಕೋಟಿ ಕನ್ನಡಿಗರ ಆಸ್ತಿ" ಎಂದು ಪರವಾದಿಗಳು ಹೇಳಿದರೂ ಅದೂ ಸಹ ಸಂಪೂರ್ಣ ಸರಿಯಲ್ಲ. ಈಗಿರುವ ಆರು ಕೋಟಿ ಕನ್ನಡಿಗರ ಆಸ್ತಿಯಷ್ಟೇ ಅಲ್ಲದೇ ಅದು ಮುಂದಿನ ಪೀಳಿಗೆಯ ಆಸ್ತಿಯೂ ಹೌದಲ್ಲವೇ ? ನಾವು ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿ ನೋಡುವ ಆತುರದಲ್ಲಿ ಈಗಿರುವ ಕನ್ನಡ ಚಿತ್ರರಮಗವನ್ನೂ ಸಹ ಮುಂದಿನ ಪೀಳಿಗೆಗೆ ಇಲ್ಲವಾಗಿಸಿದರೆ ಅದು ಸರಿಯೇ ?

ಹಾಗಂತ ನಾನು ಸಂಪೂರ್ಣ ಡಬ್ಬಿಂಗ್ ವಿರೋಧಿಯೇನಲ್ಲ. ನನ್ನ ಪ್ರಕಾರ ಪರಭಾಷೆಯ ಎಲ್ಲಾ ಹೊಡಿಬಡಿ ಚಿತ್ರಗಳನ್ನು ಡಬ್ಬಿಂಗ್ ಮಾಡಿದರೆ ಅನಾಹುತವಾದೀತು. ಏಕೆಂದರೆ ಕನ್ನಡಕ್ಕಿಂತಲೂ ಕೆಟ್ಟ ಚಿತ್ರಗಳು ಬೇರೆ ಭಾಷೆಯಲ್ಲಿ ಬರುವುದಿದೆ. ಮೇಲಾಗಿ ಎಲ್ಲವನ್ನೂ ಡಬ್ಬಿಂಗ್ ಮಾಡಿ ಇರುವ ಕನ್ನಡ ಚಿತ್ರರಂಗವನ್ನೂ ಸಾಯಿಸಿದರೆ ನಂತರ "ಮುಂಗಾರುಮಳೆ, ಸಾರಥಿ, ದುನಿಯಾ, ಮೊಗ್ಗಿನ ಮನಸ್ಸು"ಗಳಂತಹ ಕನ್ನಡ ಚಿತ್ರಗಳನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಕನ್ನಡ ಸಂಸ್ಕೃತಿ ಕೇವಲ  ಈಗಿರುವ ಆರು ಕೋಟಿ ಕನ್ನಡಿಗರ ಸ್ವತ್ತಷ್ಟೇ ಅಲ್ಲ. ಅದು ಮುಂದಿನ ಪೀಳಿಗೆಯ ಸ್ವತ್ತೂ ಹೌದು. ನಮ್ಮ ಭಾಷೆಯನ್ನು ಸಧೃಡವಾಗಿಯೇ ಮುಂದಿನ ಪೀಳಿಗೆಗೂ ದಾಟಿಸುವ ಜವಾಬ್ದಾರಿ ನಮ್ಮೆಲ್ಲರದ್ದು.

ಡಬ್ಬಿಂಗ್‌ಗೆ ಒಂದು ನಿರ್ದಿಷ್ಟ ಮಾನದಂಡವನ್ನು ಅನುಸರಿಸಿ ಅವಕಾಶ ಕೊಡಬಹುದು. ಉತ್ತಮ ಅಬಿರುಚಿಯ ಚಿತ್ರಗಳನ್ನು ಡಬ್ಬಿಂಗ್ ಮಾಡಬಹುದು. ಅದಕ್ಕೊಂದು ಸೆನ್ಸಾರ್‌ ಬೋರ್ಡ್‌‌ನಂತಹ ಸಂಸ್ಥೆ ಬರಲಿ. ಹಾಗೆಯೇ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಾಫಿಕ್‌ನಂತಹ ಸದಭಿರುಚಿಯ, ವೈಜ್ಞಾನಿಕ ವಾಹಿನಿಗಳು ಕನ್ನಡಲ್ಲೆ ತರ್ಜುಮೆಯಾಗಲಿ.

28 ಎಪ್ರಿಲ್ 2012

ಮಾಧ್ಯಮಗಳವರು ಮದ್ಯಮಗಳಾದಾಗ


ಮೊನ್ನೆ ಮೊನ್ನೆ ನೆಟ್‌ನಲ್ಲಿ ಇಂತಹುದೊಂದು ಚಿತ್ರ ದೊರೆಯಿತು. ಒಬ್ಬ ವ್ಯಕ್ತಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಿದಾಗ ಎಂತವರ ಕರುಳುದಾರೂ ಚುರ‍್ ಎನ್ನದಿರದು. ಆದರೆ ಈ ಚಿತ್ರವನ್ನು ನೋಡಿದಾಗ ಅದಕ್ಕಿಂತಲೂ ಮಿಗಿಲಾಗಿ ವೇದನೆ ಕಾಡದಿರದು. ಒಬ್ಬ ವ್ಯಕ್ತಿ ಹೊತ್ತಿ ಉರಿಯುತ್ತಿದ್ದರೂ ಸಹ ಈ ರೀತಿ ಅಮಾನವೀಯವಾಗಿ ಅವನನ್ನು ಫೋಟೋ, ವೀಡಿಯೋ ತೆಗೆದುಕೊಳ್ಳುತ್ತಿರುವ ಮಾಧ್ಯಮದ ಮಂದಿಗೆ ಏನೆಂದು ಹೇಳೋಣ ? ಮಾಧ್ಯಮಗಳವರು ಮದ್ಯಮಗಳಾದಾಗ ಇಂತಹ ಆಘಾತಕಾರಿ ಘಟನೆಗಳು ನಡೆದು ಹೋಗುತ್ತವೆ. ಆ ಚಿತ್ರವನ್ನು ಒಮ್ಮೆ ಕೂಲಂಕುಶವಾಗಿ ನೋಡಿ. ಆದರೆ ಅಲ್ಲಿರುವ ಅಷ್ಟೊಂದು ಮಂದಿ ಮಾಧ್ಯಮ ಮಿತ್ರರು ಒಟ್ಟಾಗಿ ಪ್ರಯತ್ನಿಸಿದ್ದರೆ ಬೇಗನೆ ಬೆಂಕಿ ಆರಿಸಲು ಸಾಧ್ಯವಿತ್ತು. ಅದು ನಮ್ಮ ದೇಶದ್ದಲ್ಲ. ಢಾಕಾದಲ್ಲಿ ನಡೆದ ಘಟನೆ ಅನ್ನುವುದೇನೋ ನಿಜ. ಆದರೆ ವೃತ್ತಿ ಮತ್ತು ಮಾನವೀಯತೆ ಎಲ್ಲಾ ಕಡೆಗು ಒಂದೇ ಅಲ್ಲವೇ ?

ಇಂತಹ ಘಟನೆಗಳು ನಮ್ಮ ದೇಶದಲ್ಲೇನೂ ನಡೆಯುವುದೇ ಇಲ್ಲ ಎಂದಲ್ಲ. ಕಳೆದ ವರ್ಷ ತಮಿಳುನಾಡಿನಲ್ಲಿ ವಿದ್ವಂಸಕಾರಿಗಳ ದಾಳಿಗೆ ಸಿಲುಕಿ ಮಂತ್ರಿಗಳ ರಕ್ಷಣಾ ಪಡೆಯ ಸಬ್‌ಇನ್ಸ್‌ಪೆಕ್ಟರ‍್ ಓರ್ವರು ಮೂವರು ಮಂತ್ರಿಗಳ ಎದುರಲ್ಲೇ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟರು. ಅದನ್ನು ಟಿವಿ ವಾಹಿನಿಯವರು ಚಿತ್ರಿಸಿ (ಮಂತ್ರಿಗಳನ್ನೂ ತೋರಿಸುತ್ತಾ) ಜನರಿಗೆ ಹೇಳಿದ್ದು ಏನು ಗೊತ್ತೇ ? "ಮಂತ್ರಿಗಳ ಅಮಾನವೀಯತೆಯಿಂದ ಸಬ್‌ಇನ್ಸ್‌ಪೆಕ್ಟರ‍್ ಮರಣ!" ಎಂದು. ಮಂತ್ರಿಗಳಿಗಂತೂ ಮಾನವೀಯತೆ ಇಲ್ಲ ಅಂದುಕೊಳ್ಳೋಣ, ಆದರೆ ಅಲ್ಲೇ ಇದ್ದ ಈ ಮಾಧ್ಯಮದವರಾದರೂ ಗಾಯಾಳುವಿನ ರಕ್ಷಣೆಗೆ ತೆರಳಬೇಕಾಗಿತ್ತಲ್ಲ ?

ಆದರೆ ಇದೇ ಮಾಧ್ಯಮದವರು ತಮ್ಮ ಪತ್ರಿಕೆ, ಟಿವಿ ವಾಹಿನಿಗಳ ಮುಖಾಂತರ ದಿನದ ೨೪ ಗಂಟೆಯೂ ಊರಿಗೆಲ್ಲಾ ಬುದ್ದಿ ಹೇಳುತ್ತಾರೆ. ಯಾರದಾದರೂ ಚಿಕ್ಕ ತಪ್ಪು ದೊರೆತರೂ ದೊಡ್ಡದು ಮಾಡುತ್ತಾರೆ. ದೊಡ್ಡದು ಸಿಕ್ಕರೆ ಗುಡ್ಡ ಮಾಡುತ್ತಾರೆ. ಯಾವುದಾದರೊಂದು ವಿಷಯ ಸಿಕ್ಕರೆ ಅದನ್ನೇ ಹಿಡಿದುಕೊಂಡು ವಾರಗಟ್ಟಲೇ ಜಗ್ಗಾಡುತ್ತಾರೆ. ಏನೂ ಇಲ್ಲದಿದ್ದರೂ ಹೀಗೂ ಉಂಟೇ ಎಂದು ಕಾಗೆ ಹಾರಿಸುತ್ತಾರೆ. ಇವರಿಗೆ ಮಾತ್ರ ನಿಂತಲ್ಲೇ ನ್ಯಾಯ, ಅದು ಸಿಗದಿದ್ದರೆ ಮೆಘಾಫೈಟು! 

ಇದೇ ವಿಶ್ವೇಶ್ವರ ಭಟ್ಟರು ಮತ್ತು ರವಿ ಬೆಳಗೆರೆ ಬಾಯಿ ಬಯಿ ಆಗಿದ್ದಾಗ ಬೆಳಗೆರೆಯನ್ನು ಕರೆತಂದು ವಿಜಯ ಕರ್ನಟಕದಲ್ಲಿ ಅಂಕಣ ಬರೆಸಿದರು. ತಮ್ಮ ಶಿಷ್ಯ ಪ್ರತಾಪ್‌ ಸಿಂಹರ ಬಗ್ಗೆ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದರೂ ಒಂದು ಮಾತು ಅದರ ಬಗ್ಗೆ ಪಿಟ್ ಎನ್ನಲಿಲ್ಲ. ಬೆಳಗೆರೆಯ ಬುದ್ಧಿ ಲೋಕಕ್ಕೇ ತಿಳಿದಿದ್ದರೂ ತಮಗೇನೂ ತಿಳಿಯದು ಎಂಬಂತೆ ಮುಗುಮ್ಮಾಗಿದ್ದರು. ಆದರೆ ಯಾವಾಗ ಬೆಳಗೆರೆ ಇವರ ವಿರುದ್ಧವೇ ಬರೆಯಲು ತೊಡಗಿದರೋ ಆಗ ಮಾತ್ರ ಜಾಗ್ರತರಾದರು. ಈಗಂತು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬೆಳಗೆರೆ ಬಗ್ಗೆ ಧಾರಾವಾಹಿಗಳೇ ನಡೆದು ಹೋದವು. 

ಹಾಗೆಯೇ ಕೆಲವು ದಿನಗಳ ಹಿಂದೆ ಬಿದರಿ ಪ್ರಕರಣದಲ್ಲಿ ನ್ಯಾಯಮೂರ್ತಿಗಳು "ಗಧಾಫಿ, ಸದ್ದಾಂ"ಗೆ ಬಿದರಿಯನ್ನು ಹೋಲಿಸಿದರು ಎಂದು ಪ್ರತಾಪ್‌ಸಿಂಹ ಕನ್ನಡಪ್ರಭದಲ್ಲಿ ಅದನ್ನು ಮುಖಪುಟದಲ್ಲೇ ಪ್ರಶ್ನಿಸಿದ್ದರು. ಆದರೆ "ಬಿದರಿಯವರು ತಮ್ಮ ಪ್ರಮಾಣ ಪತ್ರದಲ್ಲೇ ತಾನು ಗಧಾಫಿ, ಸದ್ದಾಂ ರೀತಿ ವರ್ತಿಸಿಲ್ಲ ಎಂದಿದ್ದರು. ವೀರಪ್ಪನ್ ಕಾಯಾಚರಣೆಯಲ್ಲಿ ಬಡವರ ಮೇಲೆ ಪೊಲೀಸರಿಂದ ನಡೆದ ಹಿಂಸಾಚಾರ ನಿಜವಾಗಿದ್ದರೆ ಬಿದರಿಯವರು ಸದ್ದಾಂ, ಗಡಾಫಿಗಿಂತಲೂ ಕಡೆ" ಎಂದು ಮಾತ್ರವೇ ತಾನು ಹೇಳಿದ್ದಾಗಿ ತಿಳಿಸಿರುವ ನ್ಯಾಯಮೂರ್ತಿಗಳು ಈಗ ಕನ್ನಡಪ್ರಭ ಮೇಲೆ ನ್ಯಾಯಾಲಯ ನಿಂದನೆ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸುದ್ದಿ ಮಾತ್ರ ಕನ್ನಡಪ್ರಭದಲ್ಲಿ ಬರಲೇ ಇಲ್ಲ!

"ತಪ್ಪಾಯ್ತು ತಿದ್ಕೊತೀವಿ" ಅಂಕಣದಲ್ಲೇ ತಪ್ಪು !

ಏಪ್ರಿಲ್ ೧೯ರ ಕನ್ನಡಪ್ರಭದಲ್ಲಿ "ತಪ್ಪಾಯ್ತು ತಿದ್ಕೋತಿವಿ" ಅಂಕಣದ ಕೊನೆಯ ಪ್ಯಾರಾದಲ್ಲಿ "6.6 ಓವರ‍್ ಅಂದರೆ 7 ಓವರ‍್ ಅಂತಲೇ ಅರ್ಥ. ಆದರೆ 6ನೇ ಓವರಿನ ಕೊನೆಯ ಎಸೆತದಲ್ಲಿ ವಿಕೆಟ್ ಪತನವಾದ ಸಂದರ್ಭದಲ್ಲಿ ಹೀಗೆ ಬರೆಯಲಾಗುತ್ತದೆ. ಇಲ್ಲವಾದಲ್ಲಿ '6ನೇ ಓವರ್‌ನ ಕೊನೆಯ ಎಸೆತದಲ್ಲಿ' ಎಂದೇ ಬರೆಯಬೇಕಾಗುತ್ತದೆ." ಎಂದು ಬರೆದಿದ್ದಾರೆ.
ಆದರೆ 6.6 ಓವರ‍್ ಎಂದರೆ " 6ನೇ ಓವರಿನ ಕೊನೆಯ ಎಸೆತ" ಅಲ್ಲ. ಅದು 7ನೇ ಓವರಿನ ಕೊನೆಯ ಎಸೆತ ಆಗುತ್ತದೆ. 6 ನೇ ಓವರಿನ ಕೊನೆಯ ಎಸೆತವನ್ನು 5.6 ಓವರ‍್ ಎಂದು ಬರೆಯಬೇಕಾಗುತ್ತದೆ ಅಲ್ಲವೇ ? ಇದನ್ನು ಅವರಿಗೆ ಮಿನ್ನಂಚೆ ಮಾಡಿದರೆ ಅದೂ ಪ್ರಕಟವಾಗಲಿಲ್ಲ. ಬಹುಶಃ ತಮ್ಮ ವರದಿಗರರು, ಸಹ ಸಂಪದಕರು ಮಾಡಿದ ತಪ್ಪುಗಳನ್ನು ಮಾತ್ರ ಇವರು ತಿದ್ದುವುದೋ ಏನೋ.

19 ಎಪ್ರಿಲ್ 2012

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ
 
ಸಮ್ಮೋಹನ ಅಂದರೇನು ?

ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು.

ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ ಎನ್ನುವಂತೆ ಬಿಂಬಿಸುತ್ತಾನೋ, ಅದೇ ರೀತಿ ಸಮ್ಮೋಹನ ಕಲಿತವರೂ ಸಹ ತಮ್ಮ ಮೇಲರಿಮೆಯಿಂದಾಗಿ, ಅಥವಾ ತಮ್ಮ ವಿದ್ಯೆಗೆ ಇನ್ನಿಲ್ಲದ ಮಹತ್ವ ಸಿಕ್ಕು ತಮಗೆ ಹೆಚ್ಚಿನ ಗೌರವ ಸಿಗಲಿ ಎಂಬ ಕಾರಣಕ್ಕೆ ಸಮ್ಮೋಹನದ ಬಗ್ಗೆ ಇಲ್ಲ ಸಲ್ಲದ ಕಥೆ ಕಟ್ಟುವುದೂ ಇದೆ. ಇದರಿಂದಾಗಿ ಅದರ ಬಗ್ಗೆ ಅಷ್ಟೊಂದು ಅರಿವಿಲ್ಲದ ಸಾಮಾನ್ಯರು ಸಮ್ಮೋಹನವೆಂದರೆ ಭಯ ಬೀಳುವ, ಅದನ್ನು ಕಲಿತ ವ್ಯಕ್ತಿಗಳು ಏನು ಬೇಕಾದರೂ ಮಾಡಬಲ್ಲರು ಎಂದು ಆತಂಕ ಪಡುವಂತಾಗಿದೆ. 

ಇದಕ್ಕೆಲ್ಲಾ ಕಾರಣ ಇದೊಂದು ವಿಶಿಷ್ಟ ಕಲೆಯಾಗಿದ್ದು ಎಲ್ಲರಿಂದಲೂ ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಿಲ್ಲದಿರುವುದೇ ಆಗಿದೆ. ಆದರೆ ಎಲ್ಲಾ ಕಲೆಗಳೂ ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅನ್ನುವ ವಾಸ್ತವವನ್ನು ಅರಿತುಕೊಂಡರೆ ಸಮ್ಮೋಹನದ ಬಗ್ಗೆ ಇರುವ ಮೂಢನಂಬಿಕೆ ಕಡಿಮೆಯಾಗುತ್ತದೆ. ಉದಾ : ನಾವು ಎಷ್ಟೇ ಜಾದೂ ಕಲಿತರೂ ಅದರಲ್ಲಿ ಕರಗತವಾದ ಜಾದೂಗಾರರಂತೆ ಜಾದೂ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ಕ್ರಿಕೆಟ್‌ನಲ್ಲಿ ಮಿಂಚಲು, ಹಾಕಿಯಲ್ಲಿ ವಿಜ್ರಂಭಿಸಲು ಸಾಧ್ಯವಿಲ್ಲ. ಎಷ್ಟೋ ಜನರಿಗೆ ವಾಹನ ಚಾಲನೆ ಕರಗತವಾಗುವುದೇ ಇಲ್ಲ. ಚಿತ್ರಕಲೆ ಕೆಲವರಿಗೆ ಮಾತ್ರ ಸಿದ್ದಿಸುವುದು. ಅಷ್ಟೇಕೆ ನುರಿತ ಕುಂಬಾರನಂತೆ ನಾವು ಮಡಿಕೆ ಮಾಡಲು ಸಾಧ್ಯವೇ ? ಅವರವರ ಸಾಮರ್ಥ್ಯ ಅವರವರಿಗೆ ತಾನೆ ? ಅದೇ ರೀತಿ ಸಮ್ಮೋಹನವೂ ಒಂದು ಕಲೆಯಾಗಿದ್ದು ಅದು ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅಂದಾಕ್ಷಣ ಅದೇನೂ ಬ್ರಹ್ಮವಿದ್ಯೆ ಆಗಲು ಸಾಧ್ಯವೇ ಇಲ್ಲ. ನಿಶ್ಚಿತವಾಗಿ ಅದೊಂದು ವೈಜ್ಞಾನಿಕ ವಿಷಯ. ಯಾವುದೇ ಶಕ್ತಿಯ, ಭೂತ - ಪ್ರೇತದ ಪ್ರಭಾವದಿಂದ ಸಮ್ಮೋಹನ ಕಲಿಯುವಂತಹುದೇನೂ ಅಲ್ಲ. ಮನಸ್ಸಿನ ಹತೋಟಿಯಿಂದ ದಕ್ಕಿಸಿಕೊಳ್ಳಬೇಕಾದ ಕಲೆ ಅಷ್ಟೇ. 

ವೈಜ್ಞಾನಿಕವಾಗಿ ಸಮ್ಮೋಹನ ಹೇಗೆ ನಡೆಯುತ್ತದೆ ?

ಪ್ರತಿಯೊಬ್ಬರಲ್ಲೂ ಎರಡು ಮನಸ್ಸುಗಳಿರುತ್ತವೆ. 1. ಬಾಹ್ಯ ಮನಸ್ಸು, 2. ಸುಪ್ತ ಮನಸ್ಸು.

1. ಬಾಹ್ಯ ಮನಸ್ಸು : ಇದು ನಮಗೆಲ್ಲಾ ಅರಿವಿಗೆ ಬರುವ ನಮ್ಮ ಮನಸ್ಸು. ನಾವು ಯೋಚಿಸುವುದು ಇದರಲ್ಲೇ. ಕೋಪ, ತಾಪ, ದುಃಖ, ದುಮ್ಮಾನಗಳೆಲ್ಲಾ ಇದರಲ್ಲೇ ಮಾಡುತ್ತೇವೆ. ಸುಖ, ಸಂತೋಷಗಳೆಲ್ಲಾ ಈ ಮನಸ್ಸಿಗೇ ಬೇಕಾಗಿರುವುದು. ವಾಸ್ತವವಾಗಿ ನಾವು ನಿದ್ರಿಸುವುದು ಎಂದರೆ ಈ ಬಾಹ್ಯ ಮನಸ್ಸೇ ನಿದ್ರಿಸುವುದು. 

2. ಸುಪ್ತ ಮನಸ್ಸು : ಇದು ನಮ್ಮ ಅನುಭವಕ್ಕೆ ಅಷ್ಟಾಗಿ ನಿಲುಕಲಾರದು. ಆದರೆ ನಮ್ಮ ಬಾಹ್ಯ ಮನಸ್ಸನ್ನು ಮತ್ತು ದೇಹವನ್ನು ನಮ್ಮ ಅನುಭವಕ್ಕೆ ಬಾರದೇನೇ, ಅನುಮತಿಯನ್ನೂ ಪಡೆಯದೇನೇ ನಿಯಂತ್ರಿಸುತ್ತಿರುತ್ತದೆ. ಉದಾ : ನಾವು ಏನೋ ಕೆಲಸ ಮಾಡುತ್ತಿರುವಾಗ ನಿಮ್ಮ ಮುಂಗೈಗೆ ಚೂರು ಬಿಸಿ ತಾಗಿತು ಅಂದುಕೊಳ್ಳಿ. ಆಗ ತಟ್ಟನೆ ಕೈ ಹಿಂತೆಗೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಕಂಡಿತವಾಗಿ ನನ್ನ ಮುಂಗೈಗೆ ಬಿಸಿ ತಾಗುತ್ತಿದೆ, ಅದು ಸುಡುತ್ತದೇನೋ, ಕೈ ಹಿಂತೆಗೆದುಕೊಳ್ಳೋಣ ಎಂದು ಯಾರಾದರೂ ಯೋಚಿಸಿರುತ್ತಾರಾ? ಇಲ್ಲ. ನಾವು ಯೋಚಿಸುವ ಮುನ್ನವೇ ನಮ್ಮ ಸುಪ್ತ ಮನಸ್ಸು ಆ ಕೆಲಸವನ್ನು ಮಾಡಿಸಿರುತ್ತದೆ. ಅದೇ ಅದರ ಕೆಲಸ.

ಅದೇ ರೀತಿ ನಾವೊಂದು ತಪ್ಪಾದ ಕೆಲಸವನ್ನು ಮಾಡಲು ಹೊರಟಾಗಲೂ ಸಹ ಬೇಡ, ಸಿಕ್ಕಿ ಹಾಕಿಕೊಳ್ತೀಯ ಎಂದು ಎಚ್ಚರಿಸುವುದು ಇದೇ ಸುಪ್ತ ಮನಸ್ಸು. ಆದರೆ ಅದರ ಮಾತನ್ನು ಕೇಳದೇನೇ ನಾವು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ರಾತ್ರಿ ಕಾಣುವ ಕನಸುಗಳು ಸುಪ್ತ ಮನಸ್ಸಿಗೆ ಉತ್ತಮ ಉದಾಹರಣೆ. ಬಾಹ್ಯ ಮನಸ್ಸು ಮಲಗಿರುವಾಗ ಸುಪ್ತ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆದರೆ ಯಾವಾಗಲೂ ಅದು ನಿದ್ರಿಸುವುದಿಲ್ಲ. ಸದಾ ಬಾಹ್ಯ ಮನಸ್ಸಿನಿಂದ ಅದು ಸಂದೇಶಗಳನ್ನು ಸ್ವೀಕರಿಸುತ್ತಲೆ ಇರುತ್ತದೆ. ಹಾಗೆ ಸ್ವೀಕರಿಸಿದ ಸಂದೇಶಗಳ ಪ್ರತಿಫಲನವೇ ಕನಸುಗಳು. ನಾವು ದಿನವಿಡೀ ಸುಪ್ತ ಮನಸ್ಸಿಗೆ ಏನೇನು ಸಂದೇಶಗಳನ್ನು ನೀಡುತ್ತಾ ಹೋಗಿರುತ್ತವೋ ಅದೆಲ್ಲಾ ಕನಸಿನ ರೂಪದಲ್ಲಿ ಅದು ಮನನ ಮಾಡುತ್ತದೆ. ನಾವು ಸಂಕಷ್ಟದಲ್ಲಿದ್ದಾಗ ಕೆಟ್ಟ ಕನಸುಗಳು ಬೀಳುವುದು ಇದೇ ಕಾರಣಕ್ಕೇ. 

ಆದರೆ ಬಾಹ್ಯ ಮನಸ್ಸಿನಂತೆ ಸುಪ್ತ ಮನಸ್ಸಿಗೆ ತರ್ಕ ಮಾಡುವ, ಪ್ರಶ್ನಿಸುವ ಗುಣವಿಲ್ಲ. ಬಾಹ್ಯ ಮನಸ್ಸು ನೀಡುವ ಆಜ್ಞೆಗಳನ್ನು ಪಾಲಿಸುತ್ತಾ ಹೋಗುತ್ತದೆ. ಇದನ್ನೇ ಸಮ್ಮೋಹನದಲ್ಲಿ ನಾವು ಉಪಯೋಗಿಸಿಕೊಳ್ಳುವುದು. ನಿಜವಾಗಿ ಸಮ್ಮೋಹನ ಏನೆಂದರೆ ಎದುರಿನ ವ್ಯಕ್ತಿಯ ಬಾಹ್ಯ ಮನಸ್ಸನ್ನು ನಿದ್ರೆಗೆ ಜಾರಿಸಿ ಆತನ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳುವುದು. ಆ ಮೂಲಕ ಆತನು ಆ ಸಮಯದಲ್ಲಿ ನಾವು ಏನು ಹೇಳಿದರೂ ಕೇಳುವಂತೆ ಮಾಡುವುದು. ಸುಪ್ತ ಮನಸ್ಸಿಗೆ ತರ್ಕ, ಅಥವಾ ಪ್ರಶ್ನಿಸುವ ಗುಣವಿಲ್ಲವಾದ್ದರಿಂದ ನಮ್ಮ ಆಜ್ಞೆಯನ್ನು ಅದು ಪಾಲಿಸುತ್ತದೆ. ಇದು ಒಂದು ರೀತಿಯ ಸನ್ನಿ ಎಂದರೆ ತಪ್ಪಾಗಲಾರದು. ಬೇರೆಯವರು ಹೇಳಿದ್ದನ್ನೆ ನಂಬುವುದು. ತರ್ಕ ಮಾಡದಿರುವುದು ಅಂದರೆ ಇದೇನೇ. ಉದಾ : ಒಬ್ಬ ಸಮ್ಮೋಹನಗೊಂಡ ವ್ಯಕ್ತಿಗೆ ಈಗ ನಿನ್ನ ತಂದೆಯ ಕಪಾಳಕ್ಕೆ ಜೋರಾಗಿ ಬಾರಿಸುತ್ತೀಯ. ಎಂದು ಹೇಳಿದರೆ ಅವನು ಹಾಗೆಯೇ ಮಾಡುತ್ತಾನೆ. ಅದನ್ನು ಸಮ್ಮೋಹನಗೊಳ್ಳದ ವೇಳೆ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ಬಾಹ್ಯ ಮನಸ್ಸು ತರ್ಕ ಮತ್ತು ಪ್ರಶ್ನಿಸುವ ಗುಣ ಹೊಂದಿದೆ. ಏನೇ ಇದ್ದರೂ ಅದರ ಸಾಧಕ ಬಾದಕಗಳನ್ನು ಅದು ವಿವೇಚಿಸುತ್ತದೆ. ಆದುದರಿಂದಲೇ ಸಮ್ಮೋಹಕರು ಅದನ್ನು ನಿದ್ರೆಗೆ ಜಾರುವಂತೆ ಮಾಡುತ್ತಾರೆ. ಸಮ್ಮೋಹನ ಎಂದರೆ ಇದೇನೆ.

ಎದುರಿನವರ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಮಗೆ ಬೇಕಾದಂತಹ ಕೆಲಸಗಳನ್ನು ಮಾಡಿಸುತ್ತೇವೆಂಬುದೇನೋ ಸರಿ. ಆದರೆ ಆ ಸುಪ್ತ ಮನಸ್ಸಿನಲ್ಲೂ ಬೇರೂರಿರುವ ನಂಬಿಕೆಗಳಿಗೆ ಹೊಡೆತ ಕೊಟ್ಟು ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಉದಾ : ಎಂದೂ ಮಾಂಸಾಹಾರ ಮಾಡದ, ಅದರತ್ತ ಆಸಕ್ತಿಯನ್ನೇ ಹೊಂದಿರದ ವ್ಯಕ್ತಿಯನ್ನು ಸಮ್ಮೋಹನಗೊಳಿಸಿದರೂ ಮಾಂಸ ತಿನ್ನಿಸಲು ಸಾಧ್ಯವಿಲ್ಲ. ಏಕೆಂದರೆ ಅವನ ಸುಪ್ತ ಮನಸ್ಸಿನಲ್ಲೂ ಸಹ ಮಾಂಸಾಹರ ನಿಶಿದ್ಧ ಎಂಬ ನಂಬಿಕೆ ಬೇರೂರಿರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಒತ್ತಾಯ ಮಾಡಿದರೆ ಸಮ್ಮೋಹನ ನಿದ್ರೆಯಿಂದ ಅವರು ಹೊರ ಬಂದು ಬಿಡುತ್ತಾರೆ.

ಸಮ್ಮೋಹನದಿಂದ ಏನು ಸಾಧ್ಯ ?

* ರಸ್ತೆಯಲ್ಲಿ ನಡೆದು ಹೋಗುತ್ತಿರುವ ವ್ಯಕ್ತಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಾವು ಯೋಚಿಸಿದಂತೆ ಒಂದು ಕೊಲೆಯನ್ನು ಬೇಕಾದರೂ ಮಾಡಿಸಬಹುದು.
* ಯಾವುದೋ ಹುಡುಗಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ಅವಳೇ ನಮ್ಮ ಬಳಿ ಬಂದು ಮುತ್ತು ಕೊಡುವಂತೆ ಮಾಡಬಹುದು.
* ಹೆಂಗಸೊಬ್ಬಳು ಅವಳು ಧರಿಸಿರುವ ಆಭರಣಗಳನ್ನೆಲ್ಲಾ ತಾನಾಗೆ ಕಳಚಿ ತಂದು ನಮಗೆ ಕೊಡುವಂತೆ ಮಾಡಬಹುದು.
- ಹೀಗೆಲ್ಲಾ ನೀವು ತಿಳಿದುಕೊಂಡಿದ್ದರೆ ಅದು ಕಂಡಿತಾ ತಪ್ಪು. ಇದೆಲ್ಲಾ ನಿಜವಾಗುವಂತಿದ್ದರೆ ಕಳ್ಳರು, ದರೋಡೆಗಾರರು, ರೇಪಿಸ್ಟ್‌ಗಳೆಲ್ಲಾ ಎಂದೋ ಸಮ್ಮೋಹನವನ್ನು ಕಲಿತುಕೊಂಡು ತಮ್ಮ ಕೆಲಸವನ್ನು ಸುಲಲಿತವನ್ನಾಗಿಸಿಕೊಂಡಿರುತ್ತಿದ್ದರು. ನಾನು ಸ್ವತಃ ಇದನ್ನು ಕಲಿತು ಸಾಕಷ್ಟು ಪ್ರಯೋಗ ನಡೆಸಿರುವೆನಾದ್ದರಿಂದ ಇದರ ಪರಿಮಿತಿಯ ಬಗ್ಗೆ ಅರಿವಿದೆ. ಎಲ್ಲೋ ಕಥೆ/ಕಾದಂಬರಿಗಳಲ್ಲಿ ಬರೆದಿರುವಂತೆ, ಅಥವಾ ಸಿನೆಮಾಗಳಲ್ಲಿ ತೋರಿಸಿರುವಂತೆ ಅಮೋಘ ಶಕ್ತಿಯೇನೂ ಸಮ್ಮೋಹನಕ್ಕೆ ಇಲ್ಲ. ಆದರೆ ಸಾಧಾರಣ ಬದುಕಿನಲ್ಲಿ ನಾವು ಊಹಿಸುವುದಕ್ಕಿಂತಲೂ ಅದ್ಬುತ ಶಕ್ತಿ ಮಾತ್ರ ಇದಕ್ಕೆ ಇರುವುದು ನಿಜ. ಆದರೆ ಅದನ್ನು ನಾವು ಅಂದುಕೊಂಡಂತೆಲ್ಲಾ ಬಳಸಲು ಸಾಧ್ಯವಿಲ್ಲ.

ವಾಸ್ತವವಾಗಿ ಏನೆಲ್ಲಾ ಸಾಧ್ಯ ?

ನಾನು ನಾಲ್ಕಾರು ವರ್ಷ ಸತತವಾಗಿ ಅಭ್ಯಾಸ ಮಾಡಿದ್ದರಿಂದ ಹಾಗೂ ಈ ವಿದ್ಯೆಯಲ್ಲಿ ನಿಷ್ಣಾತರಾದವರನ್ನು ಸಂಧಿಸಿದ್ದರಿಂದ ತಿಳಿದು ಬಂದ ವಿಷಯಗಳು ಹಲವಾರು. 

* ಸಮ್ಮೋಹನದಿಂದ ಕೆಟ್ಟ ಚಟಗಳನ್ನು ಬಿಡಿಸಬಹುದು. ಆದರೆ ನಿರಂತರವಾಗಿ ಸಮ್ಮೋಹನಗೊಳಿಸುತ್ತಾ ಅವರಿಗೆ ನಿರ್ದೇಶನ ನೀಡಬೇಕಾಗುತ್ತದೆ. ಅದಕ್ಕೂ ಮೊದಲು ಅವರು ಸಮ್ಮೋಹನಕ್ಕೊಳಗಾಗಬೇಕು. ಸಾಧಾರಣವಾಗಿ ಕೆಟ್ಟ ಚಟಕ್ಕೆ ಬಲಿಯಾಗುವವರು ದುರ್ಭಲ ಮನಃಸ್ಥಿತಿಯವರೇ. ಇಂತವರನ್ನು ಸಮ್ಮೋಹನಗೊಳಿಸುವುದು ಕಷ್ಟಸಾಧ್ಯ. ಮನೋಬಲ ಧೃಡವಾಗಿರುವ , ಏಕಾಗ್ರತೆ ಇರುವವರೇ ಸಮ್ಮೋಹನಕ್ಕೆ ಯೋಗ್ಯರು.

* ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗೆ ಆಸಕ್ತಿ ಬರುವಂತೆ ಮಾಡಬಹುದು. ಇದಕ್ಕೂ ನಿರಂತರ ಸಮ್ಮೋಹನದ ಅಗತ್ಯ ಇದೆ.

* ಒಮ್ಮೆ ನಮಗೆ ಸಮ್ಮೋಹನಗೊಂಡ ವ್ಯಕ್ತಿ ಕಂಡಿತಾ ನಮ್ಮ ಹಿಡಿತದಲ್ಲಿ ಇರುತ್ತಾನೆ. ಆದರೆ ಅವನಿಂದ ಎಲ್ಲಾ ಕೆಲಸಗಳನ್ನೂ ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಂಡಾಗಲೂ ಆತನ ಒಳ ಮನಸ್ಸು ಎಚ್ಚರವಾಗಿಯೇ ಇರುತ್ತದೆಯಾದ್ದರಿಂದ ಅವನ ಆಂತರ್ಯಕ್ಕೆ ಒಪ್ಪದ ಕೆಲಸವನ್ನು ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಳಿಸಿದಾಗ ಹುಡುಗನಿಗೆ ನಿನ್ನ ಬಟ್ಟೆಗಳನ್ನು ತೆಗೆದು ಹಾಕು ಅಂದಾಗ ಅವನು ಹಾಗೆಯೇ ಮಾಡಬಹುದು. ಆದರೆ ಹುಡುಗಿಗೆ ಹಾಗೆ ಹೇಳಿದಾಗ ಅವಳು ಅದನ್ನು ತಿರಸ್ಕರಿಸುತ್ತಾಳೆ. 

* ಸಮ್ಮೋಹನಗೊಂಡ ವ್ಯಕ್ತಿಯ ಪಂಚೇಂದ್ರಿಯಗಳು ಅವರ ಒಳ ಮನಸ್ಸಿನ ಸಂಪರ್ಕದಲ್ಲಿ ಇರುವುದಿಲ್ಲ. ಉದಾ : ಟಿ.ವಿ.ಯಲ್ಲಿ ಸಿನೆಮಾ ಬರುತ್ತಿದೆ, ಆದರೆ ಮ್ಯೂಟ್ ಮಾಡಲಾಗಿದೆ ಎಂದು ಆಜ್ಞಾಪಿಸಿದರೆ ಆತನಿಗೆ ಟಿವಿ ವ್ಯಾಲ್ಯೂಮ್ ಎಷ್ಟೇ ಇದ್ದರೂ ಯಾವ ಶಬ್ದವೂ ಕೇಳಿಸುವುದಿಲ್ಲ. ಅದೇ ರೀತಿ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ತೋರಿಸಿ ನೋಡು ರಾಜ್‌ಕುಮಾರ್ ಅವರ ಮಯೂರ ಚಿತ್ರ ಬರುತ್ತಿದೆ ಎಂದರೆ, ಆತ ಹೌದು ಎಂದು ಕಣ್ಣರಳಿಸಿ ನೋಡುತ್ತಾನೆ. ಎಚ್ಚರಾದ ನಂತರ ನೀನು ಯಾವ ಚಿತ್ರ ನೋಡಿದೆ? ಎಂದು ಕೇಳಿದರೆ ಕಂಡಿತಾ ಅವನು ನಾನು ನೋಡಿದ್ದು ಮಯೂರ ಎಂದೇ ಹೇಳುತ್ತಾನೆ. ಈ ರೀತಿಯ ಎಷ್ಟು ಪ್ರಯೋಗಗಳನ್ನು ಬೇಕಾದರೂ ಮಾಡಬಹುದು.

* ಸಮ್ಮೋಹನಗೊಂಡಾಗ ಯಾರನ್ನೂ ಗುರುತು ಹಿಡಿಯಲು ಸಾಧ್ಯವಿಲ್ಲ ಎಂದು ನಿರ್ದೇಶಿಸಿದರೆ, ಆತನ ಎಷ್ಟೇ ಹತ್ತಿರದ ಸ್ನೇಹಿತರಂತಿರಲಿ, ತಂದೆ ತಾಯಿಯರನ್ನೂ ಗುರುತು ಹಿಡಿಯಲಾರ. 

* ಸಮ್ಮೋಹನಗೊಳಿಸಿದಾಗ ನಿನಗೆ ಚಳಿಯಾಗುತ್ತದೆ ಎಂದರೆ ಎಷ್ಟೇ ಸೆಖೆ ಇದ್ದರೂ ನಡುಗಲಾರಂಬಿಸುತ್ತಾರೆ. ಹಾಗೆಯೇ ಸೆಖೆಯಾಗುತ್ತಿದೆ ಎಂದರೆ ಎಷ್ಟೇ ಚಳಿ ಇದ್ದರೂ ಸೆಖೆಯ ಅನುಭವ ಪಡೆಯುತ್ತಾರೆ.

* ನಾನೀಗ ಎಚ್ಚರಗೊಳಿಸುತ್ತೇನೆ, ಎಚ್ಚರಾದ ನಂತರ ನಿನಗೆ ಎದ್ದು ನಡೆದಾಡಲು ಸಾಧ್ಯವಿಲ್ಲ ಎಂದು ಹೇಳಿ ಸಮ್ಮೋಹನದಿಂದ ಎಬ್ಬಿಸಿದರೆ, ಎದ್ದ ನಂತರವೂ ಆತನಿಂದ ನಡೆದಾಡಲು ಸಾಧ್ಯವಾಗುವುದಿಲ್ಲ. ಕುಳಿತುಕೊಂಡೇ ಇರುತ್ತಾನೆ.

* ಖಾಲಿ ಹಾಳೆಯ ಪುಸ್ತಕದಲ್ಲಿ ಬಣ್ಣಬಣ್ಣದ ಚಿತ್ರಗಳಿವೆ ಎಂದು ಸಮ್ಮೋಹನದಲ್ಲಿ ತೋರಿಸಿದರೆ ನಂತರ ಎಚ್ಚರಾದ ನಂತರವೂ ಆತನಿಗೆ ಬಿಳಿ ಹಾಳೆಯಲ್ಲೂ ಬಣ್ಣಬಣ್ಣದ ಚಿತ್ರಗಳು ಕಾಣಿಸುತ್ತವೆ.

* ಸಮ್ಮೋಹನಗೊಂಡವರ ಮನಸ್ಸಿಗೆ ನೋವಾಗದಂತಹ, ಕೀಳಾಗಿ ನಡೆಸಿಕೊಳ್ಳದಂತಹ ಏನೇ ಕೆಲಸಗಳನ್ನಾದರೂ, ಹಾವ ಭಾವಗಳನ್ನಾದರೂ ಅವರಿಂದ ಮಾಡಿಸಬಹುದು. ಹಾಡು ಹೇಳಿಸಬಹುದು, ನೃತ್ಯ ಮಾಡಿಸಬಹುದು.

* ನಾನು ಮಾಡಿದ ಕುತೂಹಲಕಾರಿ ಪ್ರಯೋಗವೆಂದರೆ ಒಬ್ಬ ಹುಡುಗನನ್ನು ಸಮ್ಮೋಹನಗೊಳಿಸಿ ನೀನು ಈಗ ಎಚ್ಚರಾಗುತ್ತೀಯ, ಎಚ್ಚರಾದ ನಂತರ ನಿನಗೆ ಟೇಬಲ್ ಮೇಲಿರುವ ಪುಸ್ತಕ ಕಾಣಿಸುವುದಿಲ್ಲ. ಎಂದು ಹೇಳಿ ಎಬ್ಬಿಸಿದ್ದೆ. ಟೇಬಲ್ ಮೇಲೆ ಬೇರೇನೂ ವಸ್ತುಗಳಿಲ್ಲದೇ ಬರೇ ಒಂದು ಪುಸ್ತಕವನ್ನು ಮಾತ್ರ ಇಡಲಾಗಿತ್ತು. ಎಚ್ಚರಾದ ನಂತರ ಟೇಬಲ್ ಮೇಲಿರುವ ಪುಸ್ತಕ ಕೊಡು ಅಂದಾಗ ಅವನು ಟೇಬಲ್ ನೋಡಿ ಅಲ್ಲಿ ಏನೂ ಇಲ್ಲ ಅಂದ! ಇನ್ನೊಮ್ಮೆ ಸಮ್ಮೋಹನಗೊಳಿಸಿ ನಿನಗೆ ಎಚ್ಚರಾದ ನಂತರ ನಾವ್ಯಾರೂ ನಿನ್ನ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಹೇಳಿ ಎಬ್ಬಿಸಿದೆ. ಆಶ್ಚರ್ಯವೆಂದರೆ ಆ ಕೋಣೆಯಲ್ಲಿ ಮೂರ್ನಲ್ಕು ಜನರಿದ್ದರೂ ಸಹ ಅವನು ಯಾರನ್ನೂ ಕಂಡು ಹಿಡಿಯಲಾಗದೇ ಹುಡುಕತೊಡಗಿದ್ದ. ಎದುರಲ್ಲೇ ಹೋದರೂ ಸಹ ಅವನು ಗಮನಿಸಲಿಲ್ಲ. ಇಂತಹವನ್ನು ಮನೋರಂಜನೆಗಾಗಿ ಮಾತ್ರವೇ ಮಾಡಬೇಕು.

ಕಲಿಯುವುದು ಹೇಗೆ ?

ಕಂಡಿತಾ ಇದು ಸುಲಭವಲ್ಲ. ಹಾಗಂತ ಸಾಧ್ಯವೇ ಇಲ್ಲ ಎಂದೇನಲ್ಲ. ಆದರೆ ಕಲಿಯಲು ಅಪರಿಮಿತವಾದ ಸಹನೆ ಮತ್ತು ಸಮಯ, ಶ್ರದ್ಧೆ ಬೇಕಾಗುತ್ತದೆ. ಒಂದೆರಡು ದಿನಕ್ಕೆ, ತಿಂಗಳಿಗೆ ಕರಗತವಾಗುವ ಕಲೆಯಲ್ಲ ಇದು. ಮುಖ್ಯವಾಗಿ ಚೆನ್ನಾಗಿ ತಿಳಿದಿರುವ ವ್ಯಕ್ತಿಯ ಮಾರ್ಗದರ್ಶನ ಬೇಕೆ ಬೇಕಾಗುತ್ತದೆ. ಇಲ್ಲವೆಂದರೆ ನಾವು ಕಷ್ಟಕ್ಕೆ ಸಿಲುಕುವುದಲ್ಲದೇ ನಮ್ಮಿಂದ ಪ್ರಯೋಗಕ್ಕೊಳಗಾಗಿ ಬೇರೆಯವರಿಗೂ ತೊಂದರೆ ಆಗಬಹುದು.

ಏಕಾಗ್ರತೆಯೇ ಇದರ ಮುಖ್ಯ ಬಂಡವಾಳ. ಅದನ್ನು ಸಾಧಿಸಲು ಅನೇಕ ಕ್ರಮಗಳಿವೆ. ಅವುಗಳನ್ನು ಇಲ್ಲಿ ಸವಿವರವಾಗಿ ನೀಡಲು ಸ್ಥಳಾಭಾವ. ಹಾಗೂ ಹಾಗೆ ನೀಡಬೇಕೆಂದರೆ ದೊಡ್ಡದೊಂದು ಪುಸ್ತಕವನ್ನೇ ಬರೆಯಬೇಕಾದೀತು. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಏಕಾಗ್ರತೆ ಗಳಿಸಲು ಕೆಲವೊಂದು ಪರಿಕರಗಳನ್ನು ಮಾಡಿಕೊಳ್ಳಬೇಕು. ಬಿಳಿಯ ಹಾಳೆಯ ಮಧ್ಯೆ ಚಿಕ್ಕದೊಂದು ಕಪ್ಪು ಚುಕ್ಕೆ ಇಟ್ಟು ಅದರ ಮೇಲೆ ಗಮನ ಇರಿಸಿ ಮನಸ್ಸಿನಲ್ಲಿ ಏನೂ ಯೋಚನೆ ಬಾರದಂತೆ ಬರೇ ಆ ಚುಕ್ಕೆ ಮಾತ್ರ ಇರುವಂತೆ ಮಾಡುವುದು ಒಂದು ವಿಧಾನ. ಇಂತಹ ಸಂದರ್ಭದಲ್ಲಿ ಕೆಲವು ದಿನಗಳು ಕಳೆದಂತೆ ನಮ್ಮ ದೇಹವನ್ನು ಏನೋ ಶಕ್ತಿ ಆವರಿಸಿಕೊಂಡಂತೆ ಭಾಸವಾಗುತ್ತದೆ. ಅದು ಬೇರೇನಲ್ಲ, ನಮ್ಮ ಸುಪ್ತ ಮನಸ್ಸು ಪ್ರಚೋದನೆಗೊಳಗಾಗಿ ನಮ್ಮ ಬಾಹ್ಯ ಮನಸ್ಸಿನೊಂದಿಗೆ ಬೆರೆಯುತ್ತಿರುವುದರ ಸಂಕೇತ. 

ಇಂತಹ ಅಭ್ಯಾಸಗಳನ್ನು ಮುಂದುವರಿಸಿದಂತೆ 15-20 ನಿಮಿಷಗಳ ನಂತರ ಕಣ್ಣು ಮುಚ್ಚಿಕೊಳ್ಳಬೇಕು. ಆಗ ಏನೇನೋ ದೃಶ್ಯಗಳು ಗೋಚರಿಸುತ್ತವೆ. ಹಾಗೂ ಒಂದು ಸುಪ್ತ ನಿದ್ರೆಗೆ ಜಾರುತ್ತೇವೆ. ಪ್ರಾರಂಭದಲ್ಲಿ ಏನೇನೋ ಮಾತುಗಳು, ಧ್ವನಿಗಳು ಕೇಳಲಾರಂಭಿಸುತ್ತವೆ. ನಿದ್ರೆಯಿಂದ ಎಚ್ಚರಾದ ನಂತರ ನಮ್ಮ ದೇಹದ ಹಿಡಿತವೇ ಇರದಂತೆ ಭಾಸವಾಗುತ್ತದೆ. ಇದೆಲ್ಲಾ ನಾವು ಸರಿಯಾದ ಕ್ರಮದಲ್ಲಿ ಏಕಾಗ್ರತೆ ಪಡೆಯುತ್ತಿದ್ದೇವೆ ಎಂಬುದರ ಸಂಕೇತಗಳಾಗಿವೆ. 

ಸ್ವ-ಸಮ್ಮೋಹನ

ಮೇಲೆ ತಿಳಿಸಿದ ಅಭ್ಯಾಸಗಳನ್ನು ಕನಿಷ್ಟ ಒಂದು ವರ್ಷವಾದರು ಮಾಡಿದ ನಂತರ ಸ್ವ-ಸಮ್ಮೋಹನಕ್ಕೆ ಇಳಿಯಬೇಕು. ಏಕಾಂತ ಸ್ಥಳದಲ್ಲಿ ಅಂಗಾತ ಮಲಗಿಕೊಂಡು ಕಣ್ಣು ಮುಚ್ಚಿ ನಿಮ್ಮ ಒಳ ಮನಸ್ಸಿಗೆ ಏನಾದರು ಆದೇಶ ನೀಡುತ್ತಾ ಹೋಗಿರಿ. ಉದಾ : ನನ್ನ ಬಲಗೈ ಎದೆಯ ಮೇಲೆ ಬರಬೇಕು ಎಂದಾಗಿರಬಹುದು. ಆದರೆ ನೀವಾಗೇ ಅದನ್ನು ಮಾಡಬಾರದು. ನೀವು ಸತತವಾಗಿ ನಿಮ್ಮ ಸುಪ್ತ ಮನಸ್ಸಿಗೆ ಆದೇಶ ನೀಡುತ್ತಾ ಹೋದಂತೆ, ಸುಪ್ತ ಮನಸ್ಸು ಪ್ರಚೋದನೆಗೊಂಡು ನಿಮ್ಮ ಬಲಗೈಯನ್ನು ತಾನಾಗೇ ಎದೆಯ ಮೇಲೆ ಬರುವಂತೆ ಮಾಡುತ್ತದೆ. ಆಗ ನಿಮ್ಮ ಸುಪ್ತ ಮನಸ್ಸು ಹತೋಟಿಗೆ ಬಂದಿದೆ ಎಂದೇ ಅರ್ಥ. 

ಇಂತಹ ಪ್ರಯೋಗಗಳನ್ನೂ ಸಹ ವರ್ಷಗಟ್ಟಲೇ ಬಿಡದೇ ಮಾಡುತ್ತಿರಬೇಕು. ತಣ್ಣೀರನ್ನು ಇದು ಬಿಸಿಯಾಗಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ನಿವು ಮುಟ್ಟಿದರೆ ಅದು ಬಿಸಿಯ ಅನುಭವ ನೀಡಬೇಕು. ಅಂಗೈಯಲ್ಲಿ ಒಂದು ನಾಣ್ಯವನ್ನು ಇರಿಸಿಕೊಂಡು ಅದು ಬಿಸಿಯಾಗುತ್ತಿದೆ ಅಂದುಕೊಳ್ಳುತ್ತಾ ಹೋದರೆ, ಸ್ವಲ್ಪ ಸಮಯದಲ್ಲೆ ಅದು ಬಿಸಿಯಾದಂತೆ ಭಾಸವಾಗಿ ಕೈ ಸುಡುವಂತಗಬೇಕು. ಅಲ್ಲಿಯವರೆಗೂ ನಿಮ್ಮ ಅಭ್ಯಾಸ ನೆಡೆಯುತ್ತಿರಬೇಕು. 

ಇಷ್ಟಾದ ನಂತರ ಬೇರೆ ವ್ಯಕ್ತಿಗಳನ್ನು ಸಮ್ಮೋಹನಕ್ಕೆ ಒಳಪಡಿಸಲು ಸಾಧ್ಯ. ಇದಕ್ಕೆ ಸೂಕ್ತ ವ್ಯಕ್ತಿಯ ಮಾರ್ಗದರ್ಶನ ಬೇಕೇ ಬೇಕು. ಮತ್ತು ಸಮ್ಮೋಹನದ ಬಗ್ಗೆ ಇರುವ ಪುಸ್ತಕಗಳನ್ನೆಲ್ಲಾ ಒಂದೂ ಬಿಡದೇ ಓದಬೇಕು.  

ಸಮ್ಮೋಹನ ಬೇಡ !

ನನ್ನ ಅನಿಸಿಕೆಯೆಂದರೆ ಬೇರೆ ವ್ಯಕ್ತಿಗಳನ್ನು ಸಮ್ಮೋಹನಗೊಳಿಸಲು ಪ್ರಯತ್ನ ಪಡದಿರುವುದೇ ಉತ್ತಮ. ನೀವೊಬ್ಬ ಮನೋವಿಜ್ಞಾನಿ ಅಥವಾ ಮನೋರಂಜನೆ ನೀಡುವ ಸ್ಟೇಜ್ ಜಾದೂಗಾರ ಆಗಿರದ ಹೊರತೂ ಅದರ ಅಗತ್ಯ ಯಾರಿಗೂ ಇರುವುದಿಲ್ಲ. ಬದಲಿಗೆ ಸಮ್ಮೋಹನ ಎಂದರೇನೆಂದು ತಿಳಿದುಕೊಂಡು, ಸ್ವ-ಸಮ್ಮೋಹನದಿಂದ ಲಾಭ ಪಡೆಯುವುದೇ ಜಾಣತನ. ಸ್ವ- ಸಮ್ಮೋಹನದಿಂದ ನಮ್ಮ ಬದುಕನ್ನು ಆದಷ್ಟು ಉತ್ತಮ ಪಡಿಸಿಕೊಳ್ಳಬಹುದು. ನೆಮ್ಮದಿಯಿಂದ ಇರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಹುದು. ನಮಗೆ ಬೇಕಾದ ಕೆಲಸಗಳೆಡೆಗೆ ಮನಸ್ಸನ್ನು ಹರಿಯುವಂತೆ ಮಾಡಬಹುದು. ಸಂಕಷ್ಟಗಳು ಎದುರಾದಾಗ ಕೂಡಾ ನಿಶ್ಚಿಂತೆಯಿಂದ ಇರಲು ಸಾಧ್ಯ. 

14 ಎಪ್ರಿಲ್ 2012

ಕನ್ನಡದಲ್ಲೊಂದು ’ಪ್ರಶ್ನೋತ್ತರ’ ಜಾಲತಾಣ


ನಮಗೆ ಏನಾದರೂ ಸಂದೇಹ ಬಂದರೆ, ಅಥವಾ ತಿಳಿಯದಿರು ವಿಷಯಗಳ ಬಗ್ಗೆ ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳಲು ಆಂಗ್ಲದಲ್ಲಿ ಸಾವಿರಾರು ಜಾಲತಾಣಗಳು ಇವೆ. ಆದರೆ ಇದೇ ರೀತಿಯ ಕನ್ನಡದ ತಾಣವೊಂದನ್ನು ಹುಡುಕಿ ತೆಗೆಯುವುದು ತುಂಬಾ ಕಷ್ಟ. ಏಕೆಂದರೆ ಕನ್ನಡದ ಮೇಲೆ ಕನ್ನಡಿಗರ ಅಭಿಮಾನ ಅಷ್ಟೊಂದು ಅಘಾಧವಾಗಿದೆ. 

ಸೈಬರ‍್ ಫಂಡಾ ದವರು ಈ ಮೊದಲು ಇಂತಹುದೊಂದು ತಾಣವನ್ನು ಮಾಡಿದ್ದರು. ಆದರೆ ಯಾಕೋ ಅದನ್ನು ನಿರ್ವಹಿಸದೇ ಬಿಟ್ಟಿದ್ದಾರೆ. ಈಗ ನಾನೊಂದು ಅದೇ ರೀತಿಯ ಪ್ರಶ್ನೋತ್ತರ ತಾಣವನ್ನು ಕನ್ನಡದಲ್ಲೇ ಮಾಡಿದ್ದೇನೆ. ಇದನ್ನು ಕನ್ನಡಿಗರು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾರೋ ಗೊತ್ತಿಲ್ಲ. ಆಸಕ್ತಿ ಇರುವವರು ಒಮ್ಮೆ ನೋಡಿ.

ಇದರಲ್ಲಿ ನೋಂದಾಯಿಸಿಕೊಂಡು ಸದಸ್ಯರಾಗಬಹುದು. ನಿಮಗೆ ಬೇಕಾದ ಪ್ರಶ್ನೆಯನ್ನು ಕೇಳಿ ಬೇರೆಯವರಿಂದ ಉತ್ತರ ಪಡೆಯಬಹುದು. ಅಥವಾ ಅಲ್ಲಿ ಬೇರೆಯವರು ಕೇಳಿರುವ ಪ್ರಶ್ನೆಗೆ ನೀವೂ ಉತ್ತರಿಸಬಹುದು. ಸದಸ್ಯರಾಗಿ ನೀವು ಪ್ರಶ್ನೆಯನ್ನು ಕೇಳಿದರೆ, ಉತ್ತರಿಸಿದರೆ ಅಥವಾ ಬೇರೆಯವರ ಪ್ರಶ್ನೆ/ಉತ್ತರಕ್ಕೆ ಮತ ನೀಡಿದರೆ ನಿಮಗೆ ಅಂಕಗಳು ಸೇರುತ್ತಾ ಹೋಗುತ್ತವೆ. ನಿಮ್ಮ ಫೇಸ್‌ಬುಕ್ ಖಾತೆಯ ಮೂಲಕ ಈ ತಾಣಕ್ಕೆ ನೇರವಾಗಿ ಕೂಡಾ ಪ್ರವೇಶ ಪಡೆಯಬಹುದು.